ಬನ್ನಿ ಬದಲಾಗೋಣ | ಕವನ | ವೆಂಕಟೇಶ ಚಾಗಿ | BANNI BADALAGONA | KAVANA | VENKATESH CHAGI
**ಬನ್ನಿ ಬದಲಾಗೋಣ**
ಅದೇ ಹಳೆಯ ಸೆರೆಮನೆಗೆ
ಅದ್ದೂರಿ ಅಲಂಕಾರವ ಮಾಡಿ
ಸುಖದ ಸುಪ್ಪತ್ತಿಗೆಯ ಮಾತು
ಮನವ ಕರಗಿಸುವ ನೋಟ
ಜಗದ ಸಂಭ್ರಮಕೆ ಓಟ
ಎಷ್ಟು ದಿನ ಈ ನಾಟಕ
ಬನ್ನಿ ಬದಲಾಗೋಣ...!!
ಕಲ್ಲುಗಳು ಕರಗುತಿವೆ ಪ್ರತಿದಿನ
ಮನವು ಕರಗುವುದು ಯಾವಾಗ
ಎಲ್ಲ ಚಿಗುರುಗಳು ಕನಸುತಿವೆ
ಕನ್ನಡಿಯೊಳಗೆ ಏನೋ ವಿಚಿತ್ರ
ಬದಲಾಯಿಸುವ ಕಾರ್ಯತಂತ್ರ
ಎಷ್ಟು ದಿನ ಈ ಅಪವ್ಯಯ
ಬನ್ನಿ ಬದಲಾಗೋಣ ..!!
ಮೆಟ್ಟಿಲುಗಳು ಗಟ್ಟಿಯಾಗಿಲ್ಲ
ನೋಟುಗಳಾಗಿ ಬದಲಾಗುತಿವೆ
ಮೇಲಿವೆ ಕೃತಕ ನಕ್ಷತ್ರಗಳು
ನಕಲಿಯೋ ಅಸಲಿಯೋ
ಬಿದ್ದಾಗ ಮಾತ್ರ ಎಲ್ಲವೂ ಮೌನ
ಎಷ್ಟು ದಿನ ಈ ಮೋಸ
ಬನ್ನಿ ಬದಲಾಗೋಣ..!!
ಗೋಡೆ ಕಲ್ಲುಗಳಿಗೆ ಜೀವವ ತುಂಬಿ
ದೇಹದೊಳಗೆ ಜೀವ ಇಲ್ಲವಾಗಿದೆ
ಮಾತುಗಳೇ ಮಂತ್ರಗಳಾಗಿ
ಜಗವನ್ನೇ ಸುತ್ತುವರಿದಿವೆ
ಸೂರ್ಯನ ಬೆಳಕಿಗೂ ಬಂಧನ
ಎಷ್ಟು ದಿನ ಈ ಸೆರೆವಾಸ
ಬನ್ನಿ ಬದಲಾಗೋಣ..!!
ಕನಸುಗಳು ಕನಸಾಗಿಯೇ ನಂದಿವೆ
ಆತ್ಮಗೌರವವನೇ ದಿಕ್ಕರಿಸಿವೆ
ಆಧುನಿಕತೆಯ ಹಾದಿಯಲಿ
ಯಾವುದಕ್ಕೆ ಗೆಲುವು ?
ಮಾನವೀಯತೆಯ ಸೋಲಷ್ಟೆ
ಎಷ್ಟು ದಿನ ಈ ಕಹಿ ಸಹನೆ
ಬನ್ನಿ ಬದಲಾಗೋಣ..!!
=> ವೆಂಕಟೇಶ ಚಾಗಿ

ಕಾಮೆಂಟ್‌ಗಳು